ಕೆರಟೊಮಲಶಿಯ

ಜಿಡ್ಡಿನಲ್ಲಿ ಕರಗುವ ಜೀವಸತ್ತ್ವ ಎ ಯ ಕೊರತೆ ಆಹಾರದಲ್ಲಿದ್ದಾಗ ತಲೆದೋರುವ ವ್ಯಾಧಿ. ಪುಷ್ಟಿಕರ ಆಹಾರ ದೊರೆಯದ ಮಕ್ಕಳಲ್ಲಿ ಇದು ಸಾಮಾನ್ಯ. ಎಳೆಗೂಸುಗಳಲ್ಲಿ ನಿವಾರಿಸಬಹುದಾದ ಕುರುಡುತನಕ್ಕೆ ಹೆಚ್ಚಾಗಿ ಹಳ್ಳಿಗಳಲ್ಲಿ ಮುಖ್ಯಕಾರಣವಿದು.  ಈ ವ್ಯಾಧಿಯ ಚಿಹ್ನೆಗಳು ಮುಖ್ಯವಾಗಿ ಹೊಟ್ಟೆ ಊದುವುದು, ರಕ್ತಹೀನತೆ, ಸುಲಭವಾಗಿ ನೆಗಡಿ ಕೆಮ್ಮು ಬರುವಿಕೆ, ಶ್ವಾಸಕೋಶಗಳ ಉರಿತ, ಕಿವಿ ಸೋರಿಕೆ, ಅಲ್ಲದೆ ಹಲ್ಲು, ಮೂಳೆ, ಮೆಲ್ಲೆಲು ಬೆಳೆಯದೆ ಕೂಸು ಬಡಕಲಾಗಿರುವುದು. ಸಂಜೆ ಹೊತ್ತಿನಲ್ಲಿ ಕಣ್ಣು ಮಬ್ಬಾಗಿ  ರಾತ್ರಿಕುರುಡೂ ಅತಿಸಾರವೂ ಕಂಡು ಬಂದಾಗ ತಂದೆತಾಯಿ ಇವನ್ನು ಹಲ್ಲುಬರುವುದಕ್ಕಾಗಿ ಎಂದು ಭಾವಿಸಿ ಅಷ್ಟಾಗಿ ಗಮನಿಸುವುದಿಲ್ಲ. ಕಣ್ಣು ಗುಡ್ಡೆಯ ಮುಂದಿರುವ ಪಾರದರ್ಶಕ ಪಟಲ ಕಾರ್ನಿಯ ಮಸಕುಮಸಕಾದ ಮೇಲೆಯೇ ವೈದ್ಯರಲ್ಲಿಗೆ ಕೂಸನ್ನು ತರುವರು. ಆ ಹೊತ್ತಿಗೆ ಕೈಮೀರಿರುತ್ತದೆ. ಬಹುಪಾಲು ಕೂಸುಗಳು ಸತ್ತುಹೋಗುತ್ತವೆ. ಇದರ ಲಕ್ಷಣಗಳು ಕಾಣಿಸಿಕೊಳ್ಳುವುದು ಎಷ್ಟು ನಿಧಾನವೋ ಇದು ವಾಸಿಯಾಗುವುದು ಅಷ್ಟೇ ತಡ. ಕಣ್ಣಿನ ಕೂಡುಪೊರೆ (ಕಂಜಂರ್ವೈವ) ಕಣ್ಣೀರಿಲ್ಲದೆ ಒಣಗಿ ಒಣಗಣ್ಣಾಗುವುದು. ಕಾರ್ನಿಯಾದ ಪಕ್ಕಗಳಲ್ಲಿ ರೆಪ್ಪೆಯಂಚಿನ ಗ್ರಂಥಿಗಳಿಂದ ಬರುವ ಸುರಿತವೇ ಪಟ್ಟೆಚೂರಿನಂತೆ ಅಂಟಿಕೊಂಡು ಸಾಬೂನಿನ ನೊರೆಯಂತೆ ಬಿಳುಪಾಗಿ ಕಾಣುವುದು. ಇದನ್ನು ಬೀಟಾಟ್‍ನ ಚುಕ್ಕೆಗಳೆನ್ನುವರು. ಬರಬರುತ್ತ ಕಾರ್ನಿಯ ಒಣಗಿ, ಇದರಲ್ಲಿ ಅರವೇ ಇಲ್ಲದಂತಾಘಿ, ಕೆಲವೇ ಗಂಟೆಗಳಲ್ಲಿ ಕರಗಿ ಹುಣ್ಣಾಗುವ ಹೊತ್ತಿಗೆ ಪ್ರಾಣಕ್ಕೆ ಊನವಾಗಬಹುದು. ಕೂಸು ಅಪ್ಪಿತಪ್ಪಿ ಉಳಿದರೂ ಕಣ್ಣು ಪೂರ ಕುರುಡಾಗಿ ದಟ್ಟತಲೆಗಟ್ಟುತ್ತದೆ.  ಶ್ವಾಸಕೋಶಗಳಿಗೆ ಸುಲಭವಾಗಿ ಸೋಂಕು ಹತ್ತಿ ಕೂಸು ಸಾಯುವುದು. ಸಾಕಾದಷ್ಟು ಹಾಲು, ಮೊಸರು, ಬೆಣ್ಣೆ ಗಜ್ಜರಿ, ಹಸಿರು ಹಳದಿ ಬಣ್ಣಗಳ ತರಕಾರಿಗಳು, ಅನಾನಸು, ನಿಂಬೆ, ಕಿತ್ತಳೆ ಹಣ್ಣುಗಳನ್ನು ಆಹಾರದೊಂದಿಗೆ ಸೇವಿಸುವುದರಿಂದ ಎ ಜೀವಸತ್ತ್ವದ ಕೊರತೆಯನ್ನು ತಡೆಯಬಹುದು. ಇಲ್ಲವೇ ಷಾರ್ಕ್ ಮೀನೆಣ್ಣೆಯಲ್ಲಿ ಹೇರಳವಾಗಿರುವಂಥ ಎ ಜೀವಸತ್ತ್ವವನ್ನು ದಿನವೂ ಇಂಥ ರೋಗಿಗೆ 5.000, ಬಸುರಿಯರಿಗೆ 6.000,ಹಾಲೂಡಿಸುವವರಿಗೆ 8.000 ಹೀಗೆ ಅಂತರ ರಾಷ್ಟ್ರೀಯ ಏಕಮಾನಗಳಲ್ಲಿ ಕೊಡಬೇಕು. ಒಣಗಣ್ಣು ಸ್ವಲ್ಪ ಕಂಡಕೂಡಲೆ ತುರ್ತಿನ ಚಿಕಿತ್ಸೆ ಕೊಟ್ಟರೆ ಉಳಿಯುವ ಕೆಡುಕನ್ನು ತಪ್ಪಿಸಿ ಕೂಸನ್ನು ಉಳಿಸಬಹುದು.
ಕಳೆದ 15-20 ವರ್ಷಗಳಿಂದ ಈಚೆಗೆ ಈ ರೀತಿಯ ಕೆರಟೋಮಲೇಷಿಯ ಹಾಗೂ ವಿಟಮಿನ್ `ಎ' ಕೊರತೆ ತುಂಬಾ ಕಡಿಮೆಯಾಗಿದೆ. ಪ್ರಾಥಮಿಕ ಆರೋಗ್ಯ ಘಟಕ,  ಆರೋಗ್ಯ ಕೇಂದ್ರಗಳ ಮೂಲಕ ಕೇಂದ್ರಸರ್ಕಾರ `ಎ' ಅನ್ನಾಂಗದ ಗುಳಿಗೆಗಳನ್ನು ದಾದಿಯರ ಮೂಲಕ ವಿತರಿಸಿದ ವ್ಯವಸ್ಥೆ ಬಹಳವಾಗಿ ಇದಕ್ಕೆ ಕಾರಣವಾಗಿದೆ.					  
   (ಡಿ.ಸಿ.)
(ಪರಿಷ್ಕರಣೆ: ಡಾ|| ಎಚ್.ಎಸ್.ಮೋಹನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ